ಶ್ರೀ. ಜಿ.ಕೆ. ರವೀಂದ್ರಕುಮಾರ್ ಸಾಹಿತ್ಯ
ಸಾಹಿತ್ಯದಲ್ಲಿ ಅವರು ಅಡಗಿದ್ದಾರೆ
ಜಿ.ಕೆ.ರವೀಂದ್ರಕುಮಾರ್ ಅವರ ಕುರಿತು
ಮೂಲತ: ಚಿತ್ರದುರ್ಗ ಜಿಲ್ಲೆಯವರಾದ ಜಿ.ಕೆ.ರವೀಂದ್ರಕುಮಾರ್ ಶಿಕ್ಷಣ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಈಗ ಬೆಂಗಳೂರು ಆಕಾಶವಾಣಿಯಲ್ಲಿ ಕಾರ್ಯಕ್ರಮ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ’ಸಿಕಾಡ’, ’ಪ್ಯಾಂಜಿಯ’, ’ಕದವಿಲ್ಲದ ಊರಲ್ಲಿ’, ’ಒಂದುನೂಲಿನ ಜಾಡು’ ಹಾಗು ’ಮರವನಪ್ಪಿದ ಬಳ್ಳಿ’ ಕವನ ಸಂಕಲನಗಳನ್ನು ಪ್ರಕಟಿಸಿರುವ ಅವರು ಎರಡು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ಹಾಗು ಎರಡು ಬಾರಿ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿನಿಧಿ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಅಲ್ಲದೆ ಕಾಂತಾವರದ ’ಕವಿಮುದ್ದಣ’ ಕಾವ್ಯ ಪ್ರಶಸ್ತಿ, ಉಡುಪಿಯ ’ಕಡೆಂಗೋಡ್ಲು ಸ್ಮಾರಕ’ ಕಾವ್ಯ ಪ್ರಶಸ್ತಿ,ಅಂಕೋಲೆಯ ದಿನಕರ ದೇಸಾಯಿ ಪ್ರತಿಷ್ಠಾನದ ಕಾವ್ಯ ಪ್ರಶಸ್ತಿ ,ಹುನಗುಂದದ ’ಸಾರಂಗಮಠ’ , ಹಂಸಬಾವಿಯ ’ವಾರಂಬಳ್ಳಿ ಪ್ರತಿಷ್ಠಾನ’ , ಬೆಂಗಳೂರು ರಿಸರ್ವಬ್ಯಾಂಕ್ ಕನ್ನಡ ಸಂಘದ ’ಬೆಳ್ಳಿಹಬ್ಬದ ಪುರಸ್ಕಾರ”, ಕನ್ನಡ ಸಾಹಿತ್ಯ ಪರಿಷತ್ತಿನ ’ಸಾಹಿತ್ಯ ದಂಪತಿ ಪುರಸ್ಕಾರ’ ಅಲ್ಲದೆ ”ಹುನಗುಂದ ಸಾಹಿತ್ಯ ಸಂಭ್ರಮದ ಸಂಗಮ ಕಾವ್ಯ ಪ್ರಶಸ್ತಿ’ ಮುಂತಾದ ಹಲವು ಗೌರವಕ್ಕೆ ಪಾತ್ರರಾಗಿದ್ದಾರೆ. ವಾರಣಾಸಿಯಲ್ಲಿ ಜರುಗಿದ ಆಕಾಶವಾಣಿ ಸರ್ವಭಾಷಾ ಕವಿಸಮ್ಮೇಳನದಲ್ಲಿ (೨೦೧೧) ಕನ್ನಡವನ್ನು ಪ್ರತಿನಿಧಿಸಿದ್ದಾರೆ. ಇವರ ಕಾವ್ಯ ಕುರಿತು ’ಮಿನುಗು ಬೆಳಕು ’ ವಿಮರ್ಶಾ ಗ್ರಂಥ (ಸಂ- ಎಂ.ಎಸ್. ವೆಂಕಟರಾಮಯ್ಯ) ಹೊರಬಂದಿದೆ. ಇವರ ಹಲವು ಕವಿತೆಗಳು ಹಿಂದಿ , ಇಂಗ್ಲೀಷ್, ತೆಲುಗು, ಮುಂತಾದ ಭಾಷೆಗಳಿಗೆ ಅನುವಾದಗೊಂಡಿವೆ. ಕುವೆಂಪು ವಿಶ್ವವಿದ್ಯಾಲಯದಿಂದ ಇವರ ಕವಿತೆಗಳ ಕುರಿತ ಸಂಪ್ರಬಂಧ (ಶ್ರೀಮತಿ ಆಶಾ) ಪ್ರಕಟಗೊಂಡಿದೆ.
ವಿಮರ್ಶೆ, ಲಲಿತ ಪ್ರಬಂಧ, ಅಂಕಣ ಬರಹ ಮುಂತಾದ ಪ್ರಕಾರಗಳಲ್ಲಿಯೂ ಬರೆಯುತ್ತಿರುವ ರವೀಂದ್ರಕುಮಾರ್ ಅವರ ಪ್ರಕಟಿತ ಗದ್ಯಕೃತಿಗಳು- ’ಸುಪ್ತಸ್ವರ’(ಲೇಖನಗಳು) ’ಪುನರ್ಭವ’(ವಿಮರ್ಶೆ), ’ಜುಗಲ್ ಬಂದಿ ಚಿಂತಕ ಯು.ಆರ್. ಅನಂತಮೂರ್ತಿ’(ಬದುಕು ಬರಹ), ’ಜ್ನಾನದೇವನ ಬೋಧನೆ’ (ಅನುವಾದ), ’ಡಾ.ಎಚ್ಚೆಸ್ಕೆ (ಬದುಕು ಬರಹ), ಹಾಗು ’ಕವಿತೆ ೨೦೧೧’ (ಸಂಪಾದನೆ). ಆಕಾಶವಾಣಿಯಲ್ಲಿ ತಾವು ರೂಪಿಸಿದ ಸೃಜನಶೀಲ ರೂಪಕಗಳಿಗಾಗಿ ನಾಲ್ಕು ಬಾರಿ ಆಕಾಶವಾಣಿ ರಾಷ್ಟ್ರೀಯ ಪ್ರಶಸ್ತಿ ಪಡೆದಿರುವರಲ್ಲದೆ, ಎಂಟು ಬಾರಿ ರಾಜ್ಯ ಬಾನುಲಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಶ್ರೀ.ಜಿ.ಕೆ.ರವೀಂದ್ರಕುಮಾರ್ ಅವರು ಅಕ್ಟೋಬರ್ ೯ ೨೦೧೯ ರಲ್ಲಿ ಕಾಲದಲ್ಲಿ ಲೀನರಾದರು.
ಆತ್ಮೀಯರಿಗೆಲ್ಲ ನಮಸ್ಕಾರಗಳು.
ಜಿ.ಕೆ. ರವೀಂದ್ರಕುಮಾರ್.. ಅವರನ್ನು ಹಾಗೆಯೇ ಕರೆಯಬೇಕು. ಅದು ಅವರ ಪ್ರೀತಿಯ ಆಯ್ಕೆ. ಆ ಸಂಪೂರ್ಣ ಹೆಸರನ್ನು ಹಾಗೆಯೇ ಉಚ್ಛರಿಸಬೇಕು. ಅದು ಅವರಿಗೆ ಅತ್ಯಂತ ಹರ್ಷವನ್ನು ತರುತ್ತಿತ್ತು. ತಮ್ಮ ಹೆಸರನ್ನು ಅಷ್ಟೊಂದು ಪ್ರೀತಿ ಮತ್ತು ಕಾಳಜಿಯಿಂದ ಬಳಸುತ್ತಿದ್ದರು. ಧಾರವಾಡದ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಒಬ್ಬರು ಆಕಾಶವಾಣಿಯಲ್ಲಿ ಕಾರ್ಯಕ್ರಮ ಕೊಡಲು ಇಚ್ಛೆ ವ್ಯಕ್ತಪಡಿಸಿದ್ದರು. ರವೀಂದ್ರ ಅವರೊಂದಿಗೆ ಮಾತನಾಡುತ್ತ.. ’ಅಲ್ಲಿ ಬಂದು ಜಿಕೆಆರ್ ಅಂತ ಕೇಳ್ತೀನಿ ಬಿಡಿ ಸರ್’ ಅಂದರು. ತಕ್ಷಣ ಇವರು.. ಜಿ.ಕೆ. ರವೀಂದ್ರಕುಮಾರ್ ಅನ್ನಬೇಕು ಅಂದರು. ಆತ ಮರುಕ್ಷಣವೇ ತಿದ್ದಿಕೊಂಡು ಆಗಲಿ ಸರಿ ಹಾಗೇ ಕೇಳುತ್ತೀನಿ ಅಂದರು. ಇಂಗ್ಲೀಷಿನಲ್ಲಿ ಬರೆಯುವಾಗ ಕೆಲವರು ರವೀಂದ್ರ ಅನ್ನುವಾಗ ಐ ಅಕ್ಷರವನ್ನು ಹಾಕಿರುತ್ತಿದ್ದರು. ಅದು ಯಾರೇ ಇರಲಿ.. ಅವರನ್ನು ಕರೆದು ಎರಡು ಇ ಮೂಲಕ ಈ ಕಾರ ಬರಬೇಕು ಎಂದು ತಾಕೀತು ಮಾಡುತ್ತಿದ್ದರು. ಅದೇನಾದರೂ ಆಹ್ವಾನ ಪತ್ರಿಕೆಯಲ್ಲಿ ಮುದ್ರಿತವಾಗಿದ್ದರಂತೂ.. ಅದಕ್ಕೆ ಸಂಬಂಧಪಟ್ಟವರನ್ನು ಅವರು ಮನೆಗೆ ಅಥವ ಕಛೇರಿಗೆ ಕರೆದು ತಿಳಿಸುತ್ತಿದ್ದರು. ಇದು ಅವರು ತಮ್ಮ ಹೆಸರಿಗೆ ತಾವು ನೀಡುತ್ತಿದ್ದ ಒಂದು ಸ್ಥಾನ, ಮಾನ. ಕೆಲವರು ಸ್ವಲ್ಪ ಗುರುತಿಸಿಕೊಳ್ಳುವ ಸಮಯ ಬರುತ್ತಿದ್ದಂತೆಯೇ.. ಹೆಸರನ್ನು ಬದಲಾಯಿಸುತ್ತಿದ್ದರು ಅಥವ ಜೊತೆಗೆ ಏನಾದರೂ ಸೇರ್ಪಡೆ ಆಗಿರುತ್ತಿತ್ತು. ಇವರು ನೇರವಾಗೇ ಅವರೊಂದಿಗೆ ಹೇಳುತ್ತಿದ್ದರು.. ಇಷ್ಟು ದಿನ ಇಲ್ಲದ್ದನ್ನ ಈಗ್ಯಾಕೆ ಸೇರಿಸಿಕೊಳ್ಳಬೇಕು. ಅದು ಹೇಗಿದೆಯೋ ಹಾಗೇ ಅದನ್ನು ಒಪ್ಪಬೇಕು.. ಅವರ ದೃಷ್ಟಿಯಲ್ಲಿ ಪ್ರತಿಯೊಬ್ಬರ ಹೆಸರು ಅವರವರ ವ್ಯಕ್ತಿತ್ವದ ಪ್ರತಿಬಿಂಬ. ಅದನ್ನು ಗೌರವಿಸಬೇಕು. ಹಿಂದಿನ ಮತ್ತು ಮುಂದಿನ ಸೇರ್ಪಡೆಗಳು ಹೆಸರಿಗೊಂದು ಅಲಂಕಾರವೇ ಹೊರತು.. ಹೆಸರಿನ ವ್ಯಕ್ತಿತ್ತ್ವ ಅದಾಗುವುದಿಲ್ಲ.
ಇಷ್ಟೆಲ್ಲ ಹೆಸರನ್ನು ಕುರಿತು ಹೇಳಲು ಒಂದು ಉದ್ದೇಶವಿದೆ. ಅದೆಂದರೆ.. ಅವರ ಈ ಬ್ಲಾಗ್ ಅನ್ನು ಪ್ರಾರಂಭಿಸುವಾಗ ಅದಕ್ಕೆ ಜಿ.ಕೆ. ರವೀಂದ್ರಕುಮಾರ್ ಎಂದೇ ಹೆಸರಿಡಬೇಕು ಎಂಬುದು ಅವರ ಅಪೇಕ್ಷೆಯಾಗಿತ್ತು. ಈ ಕುರಿತು ಅವರ ನಿರ್ಗಮನದ ಹಿಂದಿನ ದಿನ ಮಗ ಆರ್. ಎಂ. ಅನನ್ಯ ವಾಸುದೇವನೊಂದಿಗೆ ದೀರ್ಘವಾಗಿ ಚರ್ಚೆ ನಡೆಸಿದ್ದರು. ಅನನ್ಯ ಅವರಿಗೆ ಈ ಕಾಲದ ಬರೆಹಗಾರರ ದೃಷ್ಟಿಕೋನಕ್ಕೂ ಹಿಂದಿನ ಬರೆಹಗಾರರ ದೃಷ್ಟಿಕೋನಕ್ಕೂ ಇರುವ ಅನೇಕ ವಿಷಯಗಳನ್ನು ತನ್ನ ಮಿತಿಯಲ್ಲಿ ವಿವರಿಸುತ್ತಿದ್ದ. ಮತ್ತು ಈ ಕಾಲದ ಆಯ್ಕೆಯಲ್ಲಿ ಸಾಮಾಜಿಕ ಜಾಲತಾಣ ಎಷ್ಟು ಪ್ರಮುಖವಾಗಿದೆ ಎಂಬುದನ್ನು ತಿಳಿಸುತ್ತಿದ್ದ. ಆಗಲೇ ಅವರದೊಂದು ವೆಬ್ ಸೈಟ್ ಪ್ರಾರಂಭಿಸಬೇಕು ಎಂಬ ಮಾತಿಗೆ ಅಂಕುರ ಹಾಕಿದ್ದು. ಅದರ ಕುರಿತ ವಿವರಗಳನ್ನು ತಿಳಿದ ರವೀಂದ್ರಕುಮಾರ್.. ಆಗಲಿ ಎಂದು ಒಪ್ಪಿಗೆ ಸೂಚಿಸಿದ್ದರು. ಆಗ ಮಗ ಅದಕ್ಕೆ ಹೆಸರು ಜಿ.ಕೆ.ಆರ್. ಅಂತ ಇಡಬಹುದೇ ಎಂದು ಕೇಳಿದಾಗ.. ಅವರ ಉತ್ತರ.. ಜಿ.ಕೆ. ರವೀಂದ್ರಕುಮಾರ್ ಎಂದು ಪೂರ್ಣವಾಗಿ ಹೆಸರು ಇರಬೇಕು ಅಂದಿದ್ದರು. ಅದರಿಂದ ಈ ಪೂರ್ಣ ಹೆಸರು.
ಅವನು ಆ ವಾರದಲ್ಲಿ ಈ ವೆಬ್ ಸೈಟ್ ಅನ್ನು ಪ್ರಾರಂಭಿಸಬೇಕಿತ್ತು. ಆದರೆ ನಡೆದುದೇ ಬೇರೆ. ಈಗ ಅದಕ್ಕೆ ಸಮಯ ಬಂದಿದೆ. ನಿನ್ನೆ ಅವರ ಹುಟ್ಟಿದ ದಿನ. ಜೂನ್ ೨೪ ೧೯೬೧. ಆದರೆ ದಾಖಲಾಗಿರುವುದು ಜೂನ್ ೨೫ ೧೯೬೧. ಈ ದಾಖಲಾತಿಯ ಒಂದು ದಿನದ ವ್ಯತ್ಯಾಸ ಅವರನ್ನು ಪ್ರತಿ ಹುಟ್ಟು ಹಬ್ಬದಲ್ಲೂ ಪ್ರಶ್ನೆ ಮಾಡುತ್ತಿತ್ತು? ಈಗ ಅಧಿಕೃತವಾದ ಹುಟ್ಟಿದ ದಿನದಂದೇ ಈ ವೆಬ್ ಸೈಟ್ ಅನ್ನು ಪ್ರಾರಂಭಿಸಲಾಗುತ್ತಿದೆ. ಇದು ಕಾಕತಾಳೀಯವೋ ಅಥವ.. ಮತ್ತೇನೋ ತಿಳಿಯದು.
ಅವರನ್ನು ಕುರಿತು ಕೆಲವು ಮಾತುಗಳನ್ನು ಹೇಳಬೇಕೆಂದರೆ....ಅವರ ಬದುಕು ಮತ್ತು ಬರೆಹ ಎರಡೂ ಒಂದೇ ಆಗಿತ್ತು. ಒಳಗೊಂದು , ಹೊರಗೊಂದು ಎಂಬ ಕಪಟವರಿಯದ ಹೃದಯ ಅವರದು. ಯಾವತ್ತೂ ತನ್ನ ಹಕ್ಕು ಮತ್ತು ಅಧಿಕಾರಕ್ಕಾಗಿ ಕೂದಲೆಳೆಯಷ್ಟೂ ಹೋರಾಡಲಿಲ್ಲ. ಆದರೆ ತನ್ನ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ಸಮಯಕ್ಕೆ ಸರಿಯಾಗಿ ಚಾಚೂ ತಪ್ಪದೆ ಚುಕ್ಕಾಣಿ ಹಿಡಿದು ವ್ಯವಸ್ಥಿತವಾಗಿ ನಿರ್ವಹಿಸಿದವರು. ಆ ಕುರಿತ ಆನಂದ ಮತ್ತು ಹೆಮ್ಮೆಯನ್ನು ಅನೇಕ ಸಲ ಹಂಚಿಕೊಂಡಿದ್ದಾರೆ. ’ಮಾಡಲೇಬೇಕಾದ್ದನ್ನು ಮಾಡದೇ ಇರುವುದೇ ವ್ಯಭಿಚಾರ’ ಎಂಬ ನಿಲುವನ್ನು ಮೌಲ್ಯವಾಗಿ ಇಟ್ಟುಕೊಂಡು ಎಂತಹುದೇ ಕಠಿಣ ಸಂದರ್ಭಗಳಲ್ಲಿ ಕೂಡ ಅತ್ಯಂತ ತಾಳ್ಮೆಯಿಂದ ತಮ್ಮ ಸ್ಥಾನಕ್ಕೆ ನ್ಯಾಯವನ್ನು ಒದಗಿಸಿದ್ದಾರೆ. ಯಾರೇ ಆಗಿರಲಿ, ಕಣ್ಣಂಚಿನಲ್ಲಿ ಸಣ್ಣ ತಿರಸ್ಕಾರವನ್ನು ವ್ಯಕ್ತಪಡಿಸಿದರೂ, ಬದುಕಿಡೀ ಅದನ್ನು ಶಾಸನದಂತೆ ಕಾಪಾಡಿಕೊಂಡು ದೂರವೇ ಉಳಿದುಬಿಡುತ್ತಿದ್ದರು. ಮತ್ತು ಅಂತಹವರಿಗೆ ಕೂಡ ತನ್ನ ಕಡೆಯಿಂದ ಸಲ್ಲಬೇಕಾದದ್ದನ್ನು ನಿಷ್ಕಶ್ಮಲವಾಗಿ ಸಲ್ಲಿಸುತ್ತಿದ್ದರು.’ ನೋ ಕ್ಲೈಮ್ಸ್ ನೋ ಕಂಪ್ಲೈಂಟ್ಸ್’ ...ಅವರ ಈ ಜನ್ಮದ ಸಿದ್ಧಾಂತವಾಗಿತ್ತು. ತನ್ನದೆಂಬ ಸಕಲವನ್ನೂ ಬಿಟ್ಟುಕೊಟ್ಟವರು ’ ಸಾಸಿವೆ ಕಾಳಿನಷ್ಟು ಪ್ರೀತಿಯೇ ಆಗಲಿ ಕೊಡಲು ಅಥವಾ ಪಡೆಯಲು ಭಾಗ್ಯವಿರಬೇಕು’ ಅನ್ನುತ್ತಿದ್ದರು. ಅವರಿಗೆ ಆಕಾಶವಾಣಿಯ ಸಮಸ್ತ ಬಳಗ, ಅಭಿಮಾನಿಗಳ ಬಳಗ, ಓದುಗ ಹಾಗು ಶ್ರೋತೃಗಳ ಬಳಗ, ಮತ್ತು ಸಾಹಿತಿಗಳ ದೊಡ್ಡ ಬಳಗದ ಪ್ರೀತಿ ಸಂದಿದೆ. ಅದೂ ಸಾಸಿವೆ ಕಾಳಿನಷ್ಟಲ್ಲ...ಬೆಟ್ಟದಷ್ಟು ಪ್ರೀತಿ... ಮೊಗೆ ಮೊಗೆದು ಕೊಟ್ಟಿದ್ದಾರೆ. ಆ ಸಂತೃಪ್ತಿ ಅವರ ಮಾತುಗಳಲ್ಲಿ, ಮೊಗದಲ್ಲಿ ಸದಾ ಕಂಡಿದೆ. ’ಹುಸಿ ನಗುತ ಬಂದೇವ, ನಸು ನಗುತ ಬಾಳೋಣ, ತುಸು ನಗುತ ತೆರಳೋಣ, ಬಡ ನೂರು ವರುಷಾನ ಹರುಷಾದಿ ಕಳೆಯೋಣ, ಯಾಕಾರೆ ಕೆರಳೋಣ...’ ಬೇಂದ್ರೆಯವರ ಸಾಲುಗಳು ನಮ್ಮ ಮನೆಯ ಗೋಡೆಯ ಮೇಲೆ ಅನೇಕ ವರ್ಷಗಳು ರಾರಾಜಿಸುತ್ತಿತ್ತು. ರವೀಂದ್ರ ಬಾಳಿದ್ದು ಕೂಡ ಹಾಗೆಯೇ. ಬದುಕಿಡೀ ಸತ್ಯ, ಪ್ರಾಮಾಣಿಕತೆ, ನಿಷ್ಠೆ, ವ್ಯಕ್ತಿಗೌರವಗಳೊಂದಿಗೆ ಮನುಷ್ಯತ್ವಕ್ಕೆ ಬೆಲೆ ನೀಡುತ್ತಲೇ ಬದುಕಿದವರು. ಕೆಲವು ಸಲ ಗೊಂದಲಕ್ಕೆ ಬಿದ್ದಾಗ , ಯಾಕೆ ಮನುಷ್ಯ ಇಷ್ಟು ನೀಚ ಆಗ್ತಾನೆ? ಅದು ನೀಚತನ, ನೀಚತನ ಅಷ್ಟೆ...ಎಂದು ನಿಟ್ಟುಸಿರು ಬಿಡುತ್ತಿದ್ದರು. ಯಾರದೇ ಹಕ್ಕುಗಳನ್ನಾಗಲೀ, ಸ್ಥಾನಮಾನಗಳನ್ನೇ ಆಗಲಿ ಕಸಿದುಕೊಳ್ಳುವುದು ಕುಬ್ಜತನ ಎಂದು ಭಾವಿಸಿದ ಅವರು, ಅಂತಹ ನೀಚರಿಗೆ ಕೂಡ ಒಂದು ಗೌರವಯುತವಾದ ಸ್ಥಾನ ನೀಡಿದವರು.
ಓದು, ಬರವಣಿಗೆ, ಮಾತು..ಪ್ರತಿಯೊಂದೂ ತಪಸ್ಸು ಎಂದು ತಿಳಿದು ಬದುಕಿದವರು. ಪ್ರತಿನಿತ್ಯ ಬೆಳಿಗ್ಗೆ ಮೂರೂವರೆಗೆ ಎದ್ದು ನಾಲ್ಕು ಘಂಟೆಗೆ ಪುಸ್ತಕದ ಬೀರುವಿನ ಬಳಿ ಕುಳಿತರೆ ಏಳುತ್ತಿದ್ದುದೇ ಆರುಘಂಟೆಗೆ. ಅದುವರೆಗಿನ ಸಮಯ ಓದಿಗೇ ಮೀಸಲು. ಆ ಸಮಯದಲ್ಲಿ ಯಾವುದೇ ಬೇರೆ ವಿಚಾರಗಳಿಗೆ ಅವಕಾಶ ಇಲ್ಲ. ಆರು ಘಂಟೆಗೆ ಸರಿಯಾಗಿ ರೇಡಿಯೋ ಹಾಕಿದರೆ ಅದರ ಸದ್ದು ಅವರು ಆಫೀಸಿಗೆ ಹೊರಡುವ ತನಕ ಅವರ ಕಿವಿಗೆ ಬೀಳುತ್ತಲೇ ಇರಬೇಕು. ಜೊತೆಗೆ ವಾಕಿಂಗ್, ಧ್ಯಾನ, ಯೋಗಾಸನ..ಇವುಗಳಿಂದ ಅವರ ಬೆಳಗು ಸಂಪೂರ್ಣ ಸಂಪನ್ನವಾಗಿರುತ್ತಿತ್ತು. ನಡುವೆ ಸಿಗುವ ಫಿಲ್ಲರ್ ಸಮಯದಲ್ಲಿ ಮನೆಯ ವಿಚಾರಗಳನ್ನು ಹಂಚಿಕೊಳ್ಳುವ ಅವಕಾಶ. ಶಿಸ್ತು ಮತ್ತು ವ್ಯವಸ್ಥಿತ ಬದುಕು ಅವರ ಉಸಿರಾಗಿತ್ತು.
ಪ್ರೀತಿಯಿಂದ,
ಮಂದಾರ