ಬಂದೀತೇ ಒಂದು ಸಾಲು ಒಡಲ ಕಟ್ಟುಗಳ ತೊರೆದು
ಕಣ್ಣ ತಪ್ಪಿಸಿದ ಮನದ ಆಸೆ ಲಯದಲ್ಲಿ
ಎಲೆ ಬಿದ್ದ ಮರದ ಮೊದಲ ಚಿಗುರಂತೆ
ಹೂವೋ ಹಣ್ಣೋ ಮರವೋ ಬಿಳಿಲೋ
ಇದ್ದಿಲ್ಲದ ನಾಳೆಯ ಹುರುಪನ್ನು ಕಾಣಿಸುವ ಇಂದು
ನೂರು ಸುತ್ತಿನ ಮನದ ಚಡಪಡಿಕೆಯ ಕೋಟೆಯಾಗಿರಲು
ಹೊಸಿಲ ದಾಟದ ಸಾಲು ಸಾಲ ಹಿಂದಲ ಸಾಲು
ಊರ ಚರಿತೆಯ ನುಗ್ಗಲ ನೂಕಿ ಇಣುಕಲು
ಇದ್ದ ಭಾವವೂ ಯಾವ ಬಾಗಿಲ ಹಿಂದೆ ಅಡಗಿತೋ
ಅವುಚಿಕೊಳ್ಳುವ ತೋಳುಗಳ ಕೆಳಗೆ ಅವುಸಿಕೊಳ್ಳುವ ಅಳುಕು
ತಾನೇ ತಪ್ಪಿಸಿ ತಾನೇ ಹುಡುಕಿ ಸಿಕ್ಕ ನೋವು ಸಿಗದ ಖುಷಿ
ಹೋಗಬಾರದೇ ತನ್ನದೂ ಒಂದು ಸಾಲು ಒಡಲ ಕಟ್ಟುಗಳ ತೊರೆದು
ಒಬ್ಬರು ಇನ್ನೊಬ್ಬರ ಸಾಲಿಗೆ ತಲೆಯಾನಿಸಲು ಕಾಯುತ್ತಿರಲು
ಒಂದು ಮಾತು ಇನ್ನೊಂದ ನೇವರಿಸುವಂತೆ ನಿಂದಿರಲು
ಯಾವ ಕೊಂಡಿ ಎಲ್ಲಿಯದೋ ಕೂಡಲಾಗದ ಸಂತೆಯಲ್ಲಿ
ಹೇಳಿಬಾರದ ಹೇಳ ಹೋಗದ ಸುಳಿಯ ಸುಳುಹಲ್ಲಿ
ಒಣಗಿದ ಅಕ್ಷರಗಳು ನೀರಡಿಸಿದಂತೆ ಮತ್ತದೇ ಸಾಲ ಕನಸಿ
ಯಾಕೆ ಸುತ್ತುವುದೋ ಎದೆ ಮೂಲದ ಕೊರಕು ಜಾಡಿನಲ್ಲಿ
ಕಾಮಿ ಬೆಕ್ಕುಗಳು ಧ್ಯಾನಕ್ಕೆ ಕೂತಿವೆ ಸಾಗುವುದ ಮರೆತು
ಮಳ್ಳಗಾಳಿಯ ಸುಳಿ ಮುಂಗುರುಳ ಬಿಡದೆ ತಡವಿರಲು
ಹಾರಲು ನಿಂತ ಹಕ್ಕಿಯ ಬಾಯಲ್ಲಿ ಕಚ್ಚಿದ ಸಾಲು
ಬೀಳಬಾರದೇ ಸಾಲು ಇಡೀ ಜಗವೇ ಕೈಯೊಡ್ಡಿ ನಿಂತಿರಲು
ಬೀಳುವುದು ಉಂಟೇ ಇದ್ದ ಮಾತುಗಳ ಮರೆತ ಬೊಗಸೆಯೊಳಗೆ
ಬಡಿಯುತ್ತಲೇ ಇರುವ ಎದೆಯ ತಾಳಕ್ಕೆ ಎಂತಲಾದರೂ
ಗೊತ್ತಿರುವ ಒಂದು ಪದದ ಹಿಂದೆ ಅವನೂ ಅವಳೂ ಗೊತ್ತಿಲ್ಲದಂತೆ
ಹುಡುಕಿದ ಕತೆಗಳ ಹಿಂದೆ ಊರೂ ಕೇರಿ ಗುರುತಿಲ್ಲದಂತೆ
ದಕ್ಕದ ಎಲ್ಲವೂ ಇನ್ನಾರದೋ ಹಗಲಾಗಿ ಇರುಳಾಗಿ ಎಲ್ಲರ ಹಿಂದೆ
ದಿನವೆಂಬುದು....
-ಜಿ.ಕೆ. ರವೀಂದ್ರಕುಮಾರ್
Commentaires