( ವಿಶೇಷ ಅಧಿಕಾರದ ಸಶಸ್ತ್ರ ಪಡೆಗಳ ದೌರ್ಜನ್ಯದ ವಿರುದ್ಧ ಹದಿನಾರು ವರ್ಷಗಳ ಕಾಲ ಉಪವಾಸ ಮಾಡಿದ
ಮಣಿಪುರದ ನಾಗರಿಕ ಹಕ್ಕುಗಳ ಹೋರಾಟಗಾರ್ತಿ ಇರೋಮ್ ಶರ್ಮಿಳಾ ಕೊನೆಗೆ ಉಪವಾಸ ನಿಲ್ಲಿಸಬೇಕಾಯಿತು
ಮತ್ತು ತನ್ನವರಿಗೆ ಬೇಡವಾಗುವ ವಾಸ್ತವ ಸತ್ಯಗಳನ್ನು ಅರಗಿಸಿಕೊಳ್ಳಬೇಕಾಯಿತು)
ನಿರರ್ಥಕವೆಂದು ಭಾಸವಾಗುವುದು ಆ ಭಾವನೆಗೂ ಅಪರಿಚಿತವೇ
ಅನುಭವಿಸುವ ಕರುಳೂ ಅಪರಿಚಿತವೇ ಆಗುವಷ್ಟರ ಮಟ್ಟಿಗೆ
ಅದು ಆಗಿಯೇ ಬಿಡುವುದು ತನಗೆ ತಿಳಿಯದೆಯೂ ಬೇಡದೆಯೂ
ಬಟ್ಟೆ ಕಳಚಿ ನೇತ್ರದೆಂಜಲಾಗುವುದು ಬಂದೂಕಿಗೂ ಅಪರಿಚಿತವೇ
ಕ್ರಾಂತಿ ಕೆಚ್ಚಿನ ಹಿಂದೆಯೂ ಅಸಹಾಯ ಅಳುವಿರುವಲ್ಲಿ
ಅದು ನಡೆದು ಬಿಡುವುದು ನಾಡು ನಡುಗಿದರೂ ನಡುಗದಿದ್ದರೂ
ಗೊಂಡಾರಣ್ಯದಲ್ಲಿ ಹಣತೆ ಹಚ್ಚಿ ಆರದಂತೆ ಕಾಯುವುದು
ಕಾಡ ಕತ್ತಲೆಗೂ ಅಪರಿಚಿತವೇ ; ಬತ್ತಿ ಮುಗಿಯುವ ಆತಂಕದಲ್ಲಿ
ಅದು ಆಗಿಯೇ ಬಿಡುವುದು ಗಾಳಿ ಹೆಡೆಯಾಡುತ್ತಲೂ ಎಡೆಯಾಗುತ್ತಲೂ
ಕಟ್ಟಿದ ಹಸಿವೆಯೇ ಪ್ರತಿಮೆಯಾಗುವುದು ಊರ ಹಬ್ಬಕೆ ಅಪರಿಚಿತವೇ
ಸಂತೃಪ್ತ ತೇಗುಗಳು ಶರಣೆನ್ನುವ ಸಂಕೋಚದಲ್ಲಿ
ಅದು ಕಂಡುಬಿಡುವುದು ಚರಿತೆಯಂತೆಯೂ ಅದರ ಬಿರುಕಿನಂತೆಯೂ
ಇಲ್ಲವೇ ಇಲ್ಲವಾಗುತ್ತಲೂ ಕನಸ ಉತ್ತಿಕೊಳ್ಳುವುದು ಅಪರಿಚಿತವೇ
ಬೇಡದ ಜೀವವೂ ಹದಿಬದೆಯ ಸರಕಾಗುವ ಸುಳಿವಲ್ಲಿ
ಅದು ತೂಗಿಯೇ ಬಿಡುವುದು ತಕ್ಕಡಿಯ ನಿಲುವಲ್ಲಿ ಊರ ಸಂತೆಯಲ್ಲಿ
ಕೊನೆಯೇ ಇಲ್ಲದ ಮೇಲೆ ಇಳಿದ ನಿಲುದಾಣವೂ ಅಪರಿಚಿತವೇ
ಕರೆವರಿಲ್ಲದ ಕಳುವರಿಲ್ಲದ ಬಾಗಿನವು ಬಿದ್ದ ಊರಲ್ಲಿ
ಅದು ದೂಡಿಯೇ ಬಿಡುವುದು ಕೊಡಲಾಗದೆಯೂ ಕೊಡಬಾರದೆಯೂ
ಕತ್ತಲೆಯು ಹೋದರೂ ಬೆಳಕು ಕಾಣುವುದು ಅಪರಿಚಿತವೇ
ಬೆಳಕು ಇದ್ದರೂ ಕಾಣಿಸದೆ ಹೋಗುವ ಹೊತ್ತಿನೂಟದಲ್ಲಿ
ಅದು ಆಗಿ ಹೋಗುವುದು ಗುರುತಿಲ್ಲದೆಯೂ ಗುರುತಾಗದೆಯೂ
ದಾರಿಗಳು ಮುಚ್ಚಿಯೂ ಜಗದ ಕತೆಯಾಗುವುದು ಅಪರಿಚಿತವೇ
ಉಳಿದ ನೋವು ಉಳಿದ ಮಾತು ಬೇಕಿಲ್ಲದ ಭೂಗೋಳದಲ್ಲಿ
ಅದು ಮುಗಿದೇ ಬಿಡುವುದು ಪಹರೆ ಸದ್ದಿನಲ್ಲಿ ಸಿಡಿವ ಶಾಂತಿಯಲ್ಲಿ
- ಜಿ.ಕೆ. ರವೀಂದ್ರಕುಮಾರ್
Comments