ದಾಟಬಾರದ ರೇಖೆಗಳ ಮುಂದೆ ಇರಲಿ
ನಿನ್ನ ಹೆಜ್ಜೆಯ ತಡವರಿಕೆ
ಮನವಳಿಕೆಯ ಪರವಶಕೆ ಇರಲು ನಿನ್ನದೇ ದಿವ್ಯ ರೇಖೆ
ತೇಲಿಸುವ ಹಾಯಿ
ಪ್ರೀತಿ ಮಾಯಿ
ಎಲ್ಲಿರುವೆ ನೀನು?
ತಡವರಿಸುವ ಕ್ಷಣಗಳನು ನೇವರಿಸುವ ಮಮತೆಯಾಗಿ
ಹಟವಿಡುವ ಗೆರೆಗಳನು ಕಟ್ಟಿಡುವ ತಾಯಾಗಿ
ನೀನೇ ಮೀರುವ ನಿನ್ನ ನಿಲುವಾಗಿ
ಯಾರಲ್ಲಿ ಯಶೋಧೆ ಯಾರಲ್ಲಿ ರಾಧೆ
ಬಾಳ ಭಾಮೆಯ ಸುತ್ತ ಕೃಷ್ಣ ಮುಚ್ಚಾಲೆ
ಹುಡುಕಲು ಬರುವಾಗ ತಪ್ಪಿಸಿಕೊಳ್ಳಬೇಕು
ತಪ್ಪಿಸಿಕೊಳ್ಳುವಾಗ ಹುಡುಕಬೇಕು
ಬಾಳ ಬಟ್ಟೆಯ ತುಂಬ ಗೆರೆಗಳ ಜಾಡು
ಮನೆಯ ಕಟ್ಟಲೇಬೇಕು ದಾಟಿಕೊಂಡು
ಬೇಡದ ಅವನ ಹುಡುಕಿಕೊಂಡು
ಕಂಡವನ ಕಳೆದುಕೊಂಡು
ಎಷ್ಟು ಮನೆಯ ಕಟ್ಟಿದರೇನು
ಮನವು ಕುಂಟೋಬಿಲ್ಲೆ
ಅಲ್ಲೇ ಇಲ್ಲೇ
ಎಲ್ಲೆ?
-ಜಿ.ಕೆ. ರವೀಂದ್ರಕುಮಾರ್
Comentários