ಕಸಿವಿಸಿಯ ಕವಲಲ್ಲಿ ಯಾರೋ ಹೆಚ್ಚಿಟ್ಟ ಹೋಳು
ಸೆಳೆದು ಕರೆದು ಎಳೆದು ಸವಿಯುವ ವೇಳೆ
ಮುಟ್ಟಿ ನೋಡಿಕೋ ಮೈಯ ಹಣ್ಣಿನಂಥ ಮನವ
ಹಿಡಿಯೋ ಹುಡಿಯೋ ಅರಿವಾಗದ ಗಲಿಬಿಲಿಯೋ
ಹೋಳೋ ಗೀಳೋ ರುಚಿ ಬಾಳಿನ ಸೀಳೋ
ತೆತ್ತುಕೊಳ್ಳುವುದಿದೆಯಲ್ಲಾ ಮನದ ಮಾಯಾರಿಕೆಗೆ
ದಾರಿ ಮುಚ್ಚಿದ ಶಬ್ದಕ್ಕೆ ಹೊಕ್ಕಳ ದಾಹ
ತಳೆಯಲಾಗದ ಕವಿತೆಗೆ ಶಬ್ದದ ಕೊರೆ
ಮೊರೆಯಿಡುವ ಎಲ್ಲರೂ ಕವಲಾಗಿ ಹೋಳಾಗಿ ನೆಲದ ಪಾಲಾಗುವಲ್ಲಿ
ಯಾರು ಯಾರನ್ನು ಕ್ಷಮಿಸುವರು
ಮತ್ತು ಕ್ಷಮಿಸಲಾರರು
|
ಹಿತ್ತಲೆನ್ನುವುದಿದೆಯಲ್ಲಾ ಎದೆಯೆನ್ನುವುದಿದ್ದ ಮೇಲೆ
ತೇಲುವುದಿದೆಯಲ್ಲಾ ಮುಳುಗಿಸುವ ನೀರ ಮೇಲೆ
ಹಿಡಿಯಲಾಗದ ಕಾಲಕ್ಕೆ ಯಾವುದೋ ಒಂದು ದೇಶ
ಒಂದು ಕೋಟೆ
ಒಂದು ಗಿಣಿ
ಒಂದು ಜೀವ
ಕಥೆಯು ಸಾಗುವಲ್ಲಿ ಮಧ್ಯೆ ಮಧ್ಯೆ ಕಾಡುವ
ಎದೆಯ ಮೂಕ ಸಾಲು
ಮಡಿಲಂತೆ ಮಡುವಂತೆ ಹಾಡುವಂತೆ
ಯಾರಿಗಾಗಿ ಯಾರು ಹಾಡುವರು
ಮತ್ತು ಹಾಡಲಾರರು
|
ಜಗವೂ ಜಗಕೆ ಆಗದಿರುವಲ್ಲಿ
ಜಗವೇ ಬಾಳುವುದಿದೆಯಲ್ಲಾ
ಅದರ ಗುಟ್ಟಿನ ಸಾಲಿಗಾಗಿ
ಕಾಯುವಲ್ಲಿ
ತಳಮಳಿಸುವಲ್ಲಿ
ಅತ್ತಾರೆ ನಕ್ಕಂತೆ ನಕ್ಕಾರೆ ಅತ್ತಂತೆ
ಮರೆತವರು ಯಾರು
ಮರೆತು ಹೋದವರು ಯಾರು?
-ಜಿ.ಕೆ. ರವೀಂದ್ರಕುಮಾರ್
Comentários