ಹರಸುವ ವಿಧಿಗೆ ಜೀವ ನೈವೇದ್ಯವ ಹಿಡಿದು ಅಲೆಯುವ ಸಾವು
ಕರೆಯುವ ವಿಧಿಗೆ ಅಮೃತದ ಬಟ್ಟಲು ಹಿಡಿದು ಸಮೆಯುವ ಜೀವ
ಸಾವ ಭಾಷೆ ಜೀವ ಭಾಷೆ ಎರಡೂ ಬೇರೆ ಬೇರೆ
ಎಂದು ಭಾವಗೊಳ್ಳುವ ವಿಶ್ವದಲ್ಲಿ ತೂಗಿಕೊಳ್ಳುವ ವೇಳೆ|
ಜಗಕಂಟುವ ಹೊಲಬಿಗೆ ಊರುವ ಪಾದ ಬೆಳೆಯುವ ಪಾದ
ಮಿಡಿವುದೇನು ತಡೆವುದೇನು ತಲೆಯೊಡ್ಡುವ ತಾಪಿ
ನಲಿವ ಮೀರಿ ಮುಗಿಲ ಮೀರಿ ಬಲಿಗೊಂಡ ಅಮೃತ
ಲೋಕೋತ್ತರದ ಗಮಲಿಗೆ ಪಾಪ ಪುಣ್ಯದ ಸಾಲು|
ಸಾವು ಬಾಳುವುದೇ ಉಸಿರ ಮೌನದ ಅಂಚಿನಲ್ಲಿ
ಬಾಳು ಅರಳುವುದೇ ಸಪ್ಪಳದ ಲಯದಲ್ಲಿ
ಇಂಗಿಕೊಳ್ಳುವ ಶಬ್ದದಲ್ಲಿ ಚೆಲ್ಲಿಕೊಳ್ಳುವ ಅರ್ಥ
ಮಳೆಬಿಲ್ಲೋ ಬಿಸಿಲ ಬಿಲ್ಲೋ ಹೂಡಲಾಗದ ಸತ್ಯ|
ಹೆಸರಿಲ್ಲದ ಬೀಜಕ್ಕೆ ಯಾವ ತಾಯಿಯ ಹಾಡು
ಶರಣೆನ್ನುವ ಕಾಡಿನಲ್ಲಿ ಎಷ್ಟು ಸಾವಿರ ತೊಟ್ಟಿಲು
ಹೆಸರಿಲ್ಲದ ಉಸಿರಿಗೆ ಯಾವ ಜೀವದ ಬೆರಳು
ಶರಣೆನ್ನದ ಊರಿನಲ್ಲಿ ಗತಿ ತಡವಿದ ಜಾಡು|
ಅರಳಿಕೊಳ್ಳುವ ಕಣ್ಣು ಮುಚ್ಚಿಕೊಳ್ಳುವ ಕಣ್ಣು
ಯಾವ ಮಾಯೆಯ ಜಾಡಿನಲ್ಲಿ ರೆಪ್ಪೆಗೊಂಡವೋ ಅವು
ತೆರೆವ ಜೀಕು ತೊಡೆವ ಜೀಕು ಮೀಟಿಕೊಂಡಿದೆ ಧರೆಯು
ನೆರಳು ಬೆಳಕಿನ ಹೊಂಚಿನಲ್ಲಿ ಪೊರೆದುಕೊಳ್ಳುವ ತಾವು |
ಜೀವ ಕಾರಣವ ಕೇಳಿ ಹಿಂದೆ ಅಲೆಯುವ ಸಾವು
ಸಾವ ಕಾರಣವ ಹೇಳಿ ಮುಂದೆ ದಾರಿ ತಪ್ಪುವ ಜೀವ
ಒದಗಿ ಬರುವುದೇ ದೈವಕ್ಕೆ ಕಲ್ಲು ಕರಗುವ ಸಮಯ
ಕಾಲ ಕರ್ಮದ ಕಾವಲಿಗೆ ಎದೆ ಹೂವಾಗುವ ಸಮಯ |
- ಜಿ.ಕೆ. ರವೀಂದ್ರಕುಮಾರ್
Comments