ನಾನು ಬೆಳೆ ಬೆಳೆದಂತೆ ಎಲ್ಲವೂ ವಿಸ್ತರಿಸಿಕೊಂಡು ಬೆಳೆದು ನನ್ನಲ್ಲಿ
ಮನೆ ಮಾರು ಗಿಡ ಮೀರಿ ಬೀದಿ ಹಾದಿ ಅಂಗಳವು ಏರಿ
ವಿಶ್ವವ್ಯಾಪಿಯಾಗಿ ಅನಿಕೇತನನಾಗಿ ಹಾರ ತುರಾಯಿಗೆ ಬಾಗಿ
ದಿವಿನುಗೊಳ್ಳುವ ಹೊತ್ತಿನಲ್ಲಿ ಏನೋ ಅಡೆ ತಡೆ ಎಳೆತದ ಬಿಗಿ
ಯಾರಿಗೂ ಕಾಣದ ಒಳಗೇ ಕೊರೆಯುವ ಮನದ ಮಣಕ
ಯಾವತ್ತೋ ಆಡಿದ್ದ ಮಾತುಗಳು ನನಗಿಂತ ದೊಡ್ಡವಾಗಿ
ಅಂದದ್ದು ಬೈದದ್ದು ಸುಖಿಸಿದ್ದು ದೂರವಿಟ್ಟದ್ದು
ಜಂಭ ಪಟ್ಟದ್ದು ಮುಚ್ಚಿಟ್ಟದ್ದು ತೆರೆದದ್ದು ತಿರುಪಿದ್ದು
ಎಲ್ಲವೂ ನನ್ನವೇ ನನಗಿಂತ ಬೆಳೆದು ದೊಡ್ಡವಾಗಿ
ಕೋನ ತ್ರಿಕೋನ ಆಯತ ಹೆಣೆದು ಸಮಾ ಹಣಿತ
ಇಂಥ ಫಲಿತ ಸಮಯದಲ್ಲಿ ನನ್ನೊಳಗೆ ಇವು ಯಾಕೆ
ಎಲ್ಲಿದ್ದವು ಇಷ್ಟುದಿನ ಕಾಣದಂತೆ ಸುಮ್ಮನೆ
ಈಗೇಕೆ ಬಂದವು ಅಡೆಯಾಗಿ ತಡೆಯಾಗಿ
ಹೇಳಿಕೇಳದೆ ಮರುಕ ತೋರದೆ
ತಿನ್ನುವಾಗೆಲ್ಲ ಚೆಲ್ಲಿಬಿಟ್ಟ ಚೂರು ಪಾರು ಅಗುಳುಗಳು
ಕೊಡುವಾಗೆಲ್ಲ ಅಷ್ಟು ಇಷ್ಟು ಉಳಿಸಿಕೊಂಡ ಚಿಲ್ಲರೆಗಳು
ಚಾಚಿ ಬಂದ ಕೈಗಳ ಮುಂದೆ ನಾಕು ಹೆಜ್ಜೆ ಹಿಂದೆ ಸರಿದದ್ದು
ಸಾಕು ಎಂದಾಗಲೂ ಅಮರಿ ನುಗ್ಗಿ ಆವರಿಸಿಕೊಂಡದ್ದು
ಬದುಕ ಲೆಕ್ಕಾಚಾರ ನಿವೃತ್ತಿಯಾಗುತ್ತಿದೆ ಎಂದುಕೊಳ್ಳುವಾಗ
ಇದಾವ ಜೀವ ಜ್ಯಾಮಿತಿಯ ಪ್ರಮೇಯ
ಇಲ್ಲಿ ವೃತ್ತ ಅಲ್ಲಿ ಚೌಕಟ್ಟು,
ವ್ಯಾಸದ ತುಂಬಾ ಆಯಕಟ್ಟು
ಅಲ್ಲಿ ಇಲ್ಲಿ ಎಲ್ಲಿ ನಾನು
ಯಾವ ಕೋನ ಯಾವ ಮಾನ
ಲೆಕ್ಕ ಲೆಕ್ಕ ಸೇರಿ ಬೆಳೆದು ಅಳೆಯುತ್ತ
ಕೈವಾರ ಮೈವಾರ ಮನವಾರ
ಅಳೆಸಿಕೊಂಡು ಅಳಿಸಿಕೊಂಡು
ಜೀವರೇಖೆ ಸುರುಟಿಕೊಂಡು
ಬಿಂದುವಂತೆ ಉಳಿಯುವಲ್ಲಿ
ಕಾಲ ಸುತ್ತಿದಂತೆ
ದೇಶ ಸುಳಿದಂತೆ ಅಯೋಮಯದ ತಲ್ಲಣ
ಬೆಳೆದು ದೇಶ ಹಿಡಿವುದೋ
ಕಳೆದು ಕಾಲವಾಗುವುದೋ
ಹೇಳುವ ಅವಕಾಶ
ತನ್ನ ಅವಕಾಶಕ್ಕಾಗಿ ಕಾಯುತ್ತಿದೆ
ಭಾಜಕದ ಎರಡು ಮೊನೆಗಳ ನಡುವೆ
- ಜಿ.ಕೆ. ರವೀಂದ್ರಕುಮಾರ್,
Comments