ಮೊದಲಸರ್ವ್ ಬಿಟ್ಟರೆ ಎರಡನೇ ಸರ್ವ್
ಅದೂ ಬಿಟ್ಟರೆ ಸರ್ವ್ ಆಕಡೆಗೆ
ಅಲ್ಲಿಂದ ಮೊದಲ ಸರ್ವ್ ಬಿಟ್ಟರೆ ಎರಡನೇ ಸರ್ವ್
ಅದೂ ಬಿಟ್ಟರೆ ಸರ್ವ್ ಈ ಕಡೆಗೆ
ಮೊದಲು ಮಾತುಕತೆ
ಬಿಟ್ಟರೆ ಎರಡನೇ ಮಾತುಕತೆ
ಅದೂ ಬಿಟ್ಟರೆ ಆ ಕಡೆಗೆ ನೋಡು
ಅಲ್ಲೂ ಬಿಟ್ಟರೆ ಈ ಕಡೆಗೆ ನೋಡು
ಆ ಕಡೆಗೆ ನೋಡು ಈ ಕಡೆಗೆ ನೋಡು
ನಡೆಯುವವರೆಗೂ ನೋಡುತ್ತಲೇ ಇರು
ವಿಂಬಲ್ಡನ್ ಗೆಲ್ಲಲೇ ಬೇಕೆಂದಿಲ್ಲ
ಎರಡು ಮೂರು ರೌಂಡು ಆಡಿಕೊಂಡೇ
ರ್ಯಾಂಕ್ ಪಡೆಯಬಹುದು
ಮತ್ತು ರಿಟೈರ್ ಆಗಬಹುದು
|
ಇನ್ನೇನು ಪಾಯಿಂಟು ಎನ್ನುವಲ್ಲಿ ಒಂದು ತಪ್ಪು
ಗೆದ್ದೆ ಎನ್ನುವಲ್ಲಿ ಒಂದು ಸಣ್ಣ ಸೋಲು
ಆಮೇಲೆ ಡ್ಯೂಸ್
ಗೆಲ್ಲಲು ಸತತ ಎರಡು ಪಾಯಿಂಟು ಬೇಕು
ಪ್ರತಿ ಮೊದಲ ಪಾಯಿಂಟೂ ಅಡ್ವಾಂಟೇಜು
ಇನ್ನು ಅಡ್ವಾಂಟೇಜಿನ ಲೆಕ್ಕಾಚಾರ
ಇವನಿಗೆ ಇವನದು
ಅವನಿಗೆ ಅವನದು
ಕೊನೆಗೆ ಯಾವುದೋ ಅಡ್ವಾಂಟೇಜೇ ಗೆಲ್ಲುತ್ತದೆ
ಅದನ್ನು ಮ್ಯಾಚ್ ಎಂದುಕೊಳ್ಳುತ್ತಾರೆ
|
ಗುರಿಯಿಟ್ಟು ಹೊಡೆಯುವುದು ಮಾತ್ರ
ಚೆಂಡು ಆಟದ ಜೀವ
ಆಚೆ ಹೋದರೆ ಹಿಡಿಯಲು ಅಲ್ಲೊಬ್ಬ
ಈಚೆ ಹೋದರೆ ಹಿಡಿಯಲು ಇನ್ನೊಬ್ಬ
ಮಧ್ಯಬಿದ್ದರೆ ತಳ್ಳಲು ಮತ್ತೊಬ್ಬ
ಕೇಳಿದಷ್ಟು ಕೊಡಲು ಸುತ್ತಲೂ ನಿಂತ ಮಂದಿ
ಆಡುವ ಚೆಂಡನ್ನು ಇಟ್ಟುಕೊಳ್ಳಲಾಗದವ ಆಡುತ್ತಾನೆ
ಇಟ್ಟುಕೊಳ್ಳಬಹುದಾದ ಎಲ್ಲರೂ ಸುಮ್ಮನೆ ನೋಡುತ್ತಾರೆ
|
ಆಡುವವನು ಬೆವರುತ್ತಾನೆ
ಟವೆಲ್ ಹಿಡಿದವನು ಓಡಿ ಕೊಡುತ್ತಾನೆ
ಅವನು ಒರೆಸಿಕೊಂಡು ಇವನೆಡೆ ಎಸೆಯುತ್ತಾನೆ
ಇವನು ಹಿಡಿದು ಬೆವರ ಮೂಸುತ್ತಾನೆ
ಟವೆಲ್ ಹಿಡಿಯುವುದಕ್ಕೂ
ಪೇಮೆಂಟ್ ಇರುತ್ತದೆ
ಯಾರಿಗೆಲ್ಲ ಅವಕಾಶ
ಗೊತ್ತಿಲ್ಲ
-ಜಿ.ಕೆ.ರವೀಂದ್ರಕುಮಾರ್
Comments