ತಾಗಿಕೊಂಡ ನೆರಳನ್ನು ತಾಗದಂತೆ ಬೆರಳಾಡಿಸುವ ಪುಟ್ಟ ಆಟವೇ
ನಿಲ್ಲದ ಉಮೇದಾಗಿ ತಡೆಯಲಾಗದ ತುರ್ತಾಗಿ
ಪ್ರತಿ ಗಳಿಗೆಯ ಮಿಂಚಾಗಿ
ಆಡಿಸುವ ನಾನೇ ಆಟದ ದಾಳವಾಗಿ
ಸೋಲದ ಛಲಕ್ಕೆ ಗೆಲ್ಲದ ಭಯಕ್ಕೆ
ಉತ್ತರವನ್ನು ಬೇಡುತ್ತೇನೆ ಆಗೀಗ
ಇರವಿನರ್ಥವ ತಿಳಿಯದೆಯೂ ಇರುವ ಸೋಜಿಗದ ಮುಂದೆ
ನನ್ನ ನಿಲುವಿನ ಇರವೇ ಪ್ರಶ್ನೆಯಾಗುವ ಗೂಢದ ಹಿಂದೆ
ಮಾತಿಲ್ಲದ ಮೋಹವಿಲ್ಲದ ರೂಪವಲ್ಲದ ಕಾಯವು
ಮಾತಿನಾಕಾರವ ನೆಚ್ಚುವ ವಿಧಿ
ಎಲ್ಲ ರೂಪದ ಗೀಳೂ
ನಿರೂಪದ ಹಂಗಿಗೆ ಅಂಟಿಕೊಳ್ಳುವ ಗತಿ
ತಾಗಿಕೊಂಡ ನನ್ನನ್ನು ತಾಗದಂತೆ ಬೆರಳಾಡಿಸದ ಮೊದ್ದು ನೆರಳೇ
ದೈತ್ಯ ದೊರೆಯೇ ಮೌನಿ ಮರುಳೇ
ಜೀವ ತಪ್ಪಲು
ನೀನು ಒಕ್ಕಲು
- ಜಿ.ಕೆ.ರವೀಂದ್ರಕುಮಾರ್
Comments