ಪ್ರತಿ ಅಕ್ಷರವೂ ಏನೋ ಹೇಳಬೇಕೆಂದು ಬರುವಲ್ಲಿ
ಏನೆಂದುಕೇಳದೆ
ನನ್ನ ಕಥೆ ಹೇಳಲು ಬಳಸಿಕೊಂಡ ನನಗೆ
ಎಂದಾದರೂ ಒಂದು ದಿನ ಅವುಗಳ ಕಥೆ ಕೇಳಬಹುದು ಎಂದು
ನನ್ನ ಹಸಿವ ಹಿಂಗಿಸುವ ಭರದಲ್ಲಿ
ಒಂದು ತುತ್ತಿನ ಕಥೆಯನ್ನೂ ಕೇಳಲಾಗಿಲ್ಲ ಇದುವರೆಗೂ
ನನಗಾಗಿ ತೇದ ಪೆನ್ನು ರಿಫಿಲ್ಲುಗಳಿಗೆ
ಧನ್ಯವಾದ ಅರ್ಪಿಸದೆ ಬಿಸಾಕಿದ ವಿಷಾದವೆ ತುಂಬಿಕೊಂಡು
ಅಕ್ಷರದ ಚಡಪಡಿಕೆಯಲ್ಲಿ ಪದಗಳು ಬಾಳಿ
ತೆತ್ತ ತುತ್ತುಗಳಲ್ಲಿ ಔತಣವು ಕೂಡಿ
ಯಾರೋ ಹೋಗಿ ಏನೋ ಬಾಳಿ
ಕಥೆಯೊಳಗೆ ವಾಕ್ಯದೊಳಗೆ ಪದ ಅಕ್ಷರದೊಳಗೆ
ಅನ್ನದೊಳಗೆ ಅಗುಳಿನೊಳಗೆ ತುತ್ತು ಹಸಿವಿನೊಳಗೆ
ಇಂಗಿ ಇರುಕಿ ಇಳಿದು ಇರುವಂಥ ಹೊತ್ತಿನಲ್ಲಿ
ಚರಿತೆಯನು ಕೆತ್ತಿ
ಕೆತ್ತಿಸಿಕೊಂಡ ಚರಿತೆಗಳಲ್ಲಿ ಇರುಕಿದ ಕಥೆಗಳ ಹುಡುಕಲು
ಹೊರಟ ಎಲ್ಲರೂ ಅವರ ಕಥೆಗಳ ಹೇಳುತ್ತ
ಕೈಯೊಳಗಿನ ಪರಿಕರಗಳು ತಮ್ಮ ಕಥೆ ಹೇಳುತ್ತ
ಇಟ್ಟ ಹೆಜ್ಜೆ ಊರಿದ ನೆರಳು ತುಳಿಸಿಕೊಂಡ ನೆಲ
ಎಲ್ಲವೂ ಕಥೆಗಳ ಪೇರಿಸುತ್ತ
ಕಥಾಸರಿತ್ಸಾಗರವ ದಾಟದೆ
ದಿನ ಮುಟ್ಟಿ ಕಾಲ ದಾಟುವುದು ಎಲ್ಲಿ?
ಮಣ್ಣಾಗುವ ಎಲ್ಲವೂ ಕಲ್ಲ ಕಥೆಯಾಗಿ ಬಾಳಲು
ನಿಂತ ಕಲ್ಲುಗಳು ಮಾತ್ರ ಒಂಟಿ ಒಂಟಿ ಮುಂದೆಯೂ
ಮುಗಿದ ಸಾಮ್ರಾಜ್ಯದ ಮೆಲುಕಲ್ಲಿ
ಅವೇ ಅಕ್ಷರಗಳು ಉರುಳಿ
ಅವೇ ಕಥೆಗಳು ಕರಗಿ
ಮತ್ತೆ ತಳೆದ
ನಾನು ಯಾವ ಕಥೆಯ ಪುರಾತನ ಸಾಕ್ಷಿಯೋ
ವರ್ತಮಾನದ ಭಿಕ್ಷೆಯೋ
ನಾಳಿನ ಹಸಿವೆಯೋ
ಕಥೆಯ ಜಂಗುಳಿಯಲ್ಲಿ ಒಂದನೊಂದ ದಾಟಿ ತಳ್ಳಿ
ಈ ಕಥೆಯ ಪಾತ್ರ ಅಲ್ಲಿ
ಆ ಕಥೆಯ ಪಾತ್ರ ಇಲ್ಲಿ
ಶುರುವಾದ ಕಥೆಯಲ್ಲಿ ಇದ್ದವರು ಈಗ ಎಲ್ಲಿ?
ಸಾಕು ಪ್ರಶ್ನೆಯ ಮಾಲೆ
ಲೈಟ್ಸ್ ಆನ್ ಆದವು ಸುಮ್ಮನಿರಿ|
ಈಗೇನಿದ್ದರೂ ಬರೀ ಚಿತ್ರಕಥೆ
ಅಂತೆ
-ಜಿ.ಕೆ. ರವೀಂದ್ರಕುಮಾರ್
Comments