ಮರವನಪ್ಪಿದ ಬಳ್ಳಿಯನ್ನುಯನ್ನು ಮರವೇ ಅಪ್ಪಿರಬಹುದು
ಹಾಗೂ ಇರಬಹುದು ಹೀಗೂ ಇರಬಹುದು
ಭಾಷೆಯಿಲ್ಲದ ಜೀವಗಳು ದಾವೆ ಹೂಡಲಾರವು
ಎದೆ ಕೊರಳು ಗಲ್ಲ, ಬೆನ್ನು ಆತುಕೊಳ್ಳುವ ಬಳ್ಳಿಗೆ
ಪುಳಕ ಗಮ್ಯದ ಖುಷಿ ಮರದ ಹೊಕ್ಕಳಿಗೂ
ತಬ್ಬಲಾಗದ ಬಾಗಲಾಗದ ಯಾತನೆಯ ನಡುವೆಯೂ
ಬಂಡೆಗಳ ಎದೆ ಬಗೆದವರು ಯಾರು ಪ್ರೀತಿಯಿಲ್ಲದ ಮೇಲೆ
ಎಂದು ತಿಳಿದ ಮೇಲೆ ಅದರ ಜೀವ ಜಲ ಯಾರಿಗೆ
ಎರುವ ಕಥೆಯಲ್ಲಿ ಇಲ್ಲದ ಕಥೆಯೂ ಅದರ ಪಾಡಿಗೆ
ಎಸೆದ ಡಬ್ಬವೂ ಹೇಳುತ್ತಿರಬಹುದು ವಿರಃಅ ನನ್ನನೇ ನೆನೆದು
ತಗೋ ಎಂದು ಕರೆದರೂ ಬಿಟ್ಟು ಬಂದ ಹೂವು ಗಿಡದಿ ಅಳುತಿರಲು
ಯಾವ ಮಗುವಿಗೆ ಕಾದು ನಿಟಿಕೆ ಮುರಿವುದೋ ಅಂಗಡಿಯ ಗೇಟು
ಬಡಿಸಿಟ್ಟ ಎಲೆ ಪಂಕ್ತಿಯಲ್ಲಿ ಯಾವ ಎಲೆ ನನ್ನದೋ
ಅಲ್ಲಿ ಇಲ್ಲಿ ಎನಿಸಿ ಕೂರುವಲ್ಲಿ ಅರಳುವುದೇ ಎಲೆಯ ಖುಷಿಯು
ನನ್ನ ಹೆಸರು ಬರೆದು ಕಾಯುವುದಂತೆ ಅಗುಳು ಹೇಳಿದವನು ಎಲ್ಲೋ
ಎಂದು ಕೂತ ಜಾಗವೂ ಮತ್ತೇಕೆ ಸೆಳೆಯುವುದು ನನ್ನ ನಾಳೆಯೂ
ಬಿಡುವ ಮನೆಯ ಗೋಡೆ ತಡವುವಲ್ಲಿ ಸೋತವೇ ಮಾತುಗಳು
ಇಂಥ ಭಾವಗಳ ಹೀರಿ ಹನಿಯುವುದೇ ಮುಗಿಲ ಮಮತೆಯ ನೀರು
ನೆಂದವರು ನೆನೆಯದವರು ಎಲ್ಲರೂ ಸುತ್ತುವರು ತಮ್ಮದೇ ಹಾದಿಯಲ್ಲಿ
ಅದು ಏನು ಇದು ಎಲ್ಲಿ ಎಂತೆಂಬ ತಿಳಿವಿಲ್ಲದ ತಿರುವಲ್ಲಿ
ಹಾರಿಸುವುದಿಲ್ಲವೆ ಬಾವುಟ ಯಾರೋ ಕಟ್ಟಿದ ದೇಶದಲ್ಲಿ
ಎಂಥ ಎಳೆಗಳ ಆಯ್ದು ಯಾರೋ ಹಾಕುತ್ತಿದ್ದಾರೆ ದಿನವೂ ರಂಗೋಲಿ
ಕಂಡ ಪಕ್ಷಿಗಳು ಹೇಳುತಿರಬಹುದು ಶಕುನ ಕಥನ ನಿತ್ಯ ಜಾವದಲ್ಲಿ
ದೇವರ ರುಜುವಲ್ಲಿ ಜನರ ಬೀಡು ಬಿಡುವರೇ ದೇವರನ್ನಲ್ಲಿ
ದೇವರು ನಮ್ಮೊಳಗೇ ಇರುವಂತೆ ನಾವೂ ಇರಬಹುದು ಅಲ್ಲಿ ಕಾಣದಂತೆ
ಇಲ್ಲವೆನ್ನುವ ಎಅಲ್ಲವೂ ಇರುವಲ್ಲಿ ಇರುವ ನಾವೂ ಇಲ್ಲದಿರುವಂತೆ
ಈ ಎಲ್ಲವೂ ಹೇಳುತ್ತಿವೆ ಈ ಕವಿತೆ ನನ್ನದಲ್ಲವಂತೆ
- ಜಿ.ಕೆ. ರವೀಂದ್ರಕುಮಾರ್
Comentários