ಒಂದು
ಹಾಲಲ್ಲಾದರೂ ಹಾಕಿ
ನೀರಲ್ಲಾದರೂ ಹಾಕಿ
ಮೊದಲು ಒಂದು ಗೋಲು ಹಾಕಿ
ಆಗ ಹೀಗಿರಲಿಲ್ಲ
ಧ್ಯಾನವಿದ್ದ ಕಾಲದಲ್ಲಿ ಚಂದ್ರ ನಗುತ್ತಲೇ ಇದ್ದ
ಚಂದ್ರ ನಗದಿದ್ದರೇನು ಈಗ
ಯಾವಾಗ ಬೇಕಿದ್ದರೂ ಅರ್ಧಚಂದ್ರ
ಸರದಿಗಟ್ಟಿ ನಿಂತ ಜನರಿರುವಾಗ
ಗಣೇಶನೂ ಪುರಾಣ ಅಶೋಕನೂ ಇತಿಹಾಸ
ಪರಂಪರೆಯ ನಾಡಿನಲ್ಲಿ ಆಟ ಮುಖ್ಯ
ಗೆಲುವಲ್ಲ
ಎರಡು
ಗೋಲಿ ಹಾರಿಸುವುದೇ ಸುಲಭವಾದ ಮೇಲೆ
ಗೋಲು ಹಾಕುವುದು ಕಷ್ಟ
ಸೀಟಿ ಊದಿದ ಮೇಲೆ ನಿಲ್ಲುವುದೂ ಕಷ್ಟ
ಅವರ ಗಡಿಯೊಳಗೆ ಇವರು
ಇವರ ಗಡಿಯೊಳಗೆ ಅವರು
ಅತಿಕ್ರಮಣದ ಭಯದಲ್ಲೇ ಹೋರಾಟ
ಗೋಲು ಯಾರಿಗೆ ಬಿದ್ದರೇನು
ಎಡಗಡೆಗೆ ಹೊಡೆದರೆ ಬಲಗಡೆಗೆ ಸರಿದು
ಬಲಗಡೆಗೆ ಹೊಡೆದರೆ ಎಡಗಡೆಗೆ ನೆಗೆದು
ದಾರಿ ತಪ್ಪುತ್ತ ದಾರಿಯಾಗುತ್ತ
ಪರಂಪರೆಯ ನಾಡಿನಲ್ಲಿ ಆಟ ಮುಖ್ಯ
ಗೆಲುವಲ್ಲ
ಮೂರು
ನಿನ್ನೆಯಿದ್ದವರು ಇಂದು ಇರುವುದೇ ಇಲ್ಲ
ನಿನ್ನೆ ತಂತ್ರ ಬೇರೆ ಇಂದಿನದೇ ಬೇರೆ
ವರ್ಷವೆಷ್ಟು ಉರುಳಿದರೂ ಸದಾ ಬೇರೆ ಬೇರೆ
ಕೈಯಲ್ಲೊಂದು ದಂಡವಿದ್ದರೆ ಸಾಕು
ಜನರ ನಡುವೆಯೇ ಬಯಲು ಆಡಲಷ್ಟು ಕಾಲ
ಆಟ ದಕ್ಕದಿದ್ದರೇನು ಕಾಲ ದಕ್ಕಿದರೆ ಸಾಕು
ಒಮ್ಮೆ ತಪ್ಪಿದರೆ ಹಳದಿ
ಇನ್ನೊಮ್ಮೆ ತಪ್ಪಿದರೆ ಕೆಂಪು
ಒಂದು ಸಲ ಹೊರಗೆ ಇದ್ದರಾಯಿತು
ಇನ್ನೊಂದು ಸಲ ಹೇಗಿದ್ದರೂ ಒಳಗೆ
ಹೋಗಿ ಬರುವ ಆಟದಲ್ಲಿ
ಸೋತರೂ ಗೆದ್ದವರ ಚಪ್ಪಾಳೆ ಇರುತ್ತದಲ್ಲ
ಒಬ್ಬರು ಸೋಲದೆ ಇನ್ನೊಬ್ಬರು ಗೆಲ್ಲುವಂತಿಲ್ಲ
ಪಡೆದು ಗೆಲ್ಲದಿದ್ದರೇನಂತೆ ಕೊಟ್ಟು ಗೆಲ್ಲು
ವುದು ಬಹಳ ದೊಡ್ಡದಂತೆ
ಗಡಿಯನ್ನೂ ಮೀರಿ ಆಟ ಬೆಳೆಯಬೇಕು
ನಾಡನ್ನೂ ಮೀರಿ ಕೀರ್ತಿ ಉಳಿದರೆ ಸಾಕು
ಪರಂಪರೆಯ ನಾಡಿನಲ್ಲಿ ಹೋರಾಟ ಮುಖ್ಯ
ಗೆಲುವಲ್ಲ
ನಾಲ್ಕು
ಹಾಲಲ್ಲಾದರೂ ಹಾಕಿ
ನೀರಲ್ಲಾದರೂ ಹಾಕಿ
ಗೋಲಲ್ಲಾದರೂ ಹಾಕಿ
ಗೋಲಿ ಮೇಲಾದರೂ ಹಾಕಿ
ಹಾಕಿ ಹಾಕಿ
ನಮ್ಮ ಕಣ್ಣೊಳಗೂ
ಕಾಯುತ್ತಲೇ ಇರುವ ಗೋಲಿ
ವೇಳೆಯಿರುವವರೆಗೆ ಪೆನಾಲ್ಟಿ
ಮುಗಿದೊಡನೆ ಸಡನ್ ಡೆತ್
ಆಮೇಲೆ ಯಾರ ಸೀಟಿಯೋ
-ಜಿ.ಕೆ.ರವೀಂದ್ರಕುಮಾರ್
Comentarios