ಕವನದ ಸಾಲು ಪ್ಯಾರಾಗಳ ಮಧ್ಯೆ ಅಲ್ಲಲ್ಲಿ ಬಿಟ್ಟ ಜಾಗ
ಅಷ್ಟು ಜಾಗವಿದ್ದಾಗ ಮಾತ್ರ ಅಷ್ಟಿಷ್ಟು ಅರ್ಥವಾಗುವುದು ಎಂಬ ಪಾಠ
ಇರದ ಜಾಗದಲ್ಲೂ ಜಾಗ ಮಾಡಿಕೊಂಡೇ ತಿಳಿಯಬೇಕು ಎಂಬ ಬೋಧೆ
ಕಂಡಿದ್ದು ಸಿಹಿಯಾದರೆ ಕಾಣದೇ ಇದ್ದದ್ದು ಮಧುರ ಅಂತ ಅಲಂಕಾರ ಬೇರೆ
ಒಟ್ಟು ಸಿಗದುದರ ಹಿಂದೆ ಸದಾ ಓಡು ಎಂಬ ರಿಗರಸ್ ತಾಲೀಮು
ಇದು ಕವಿತೆಗೆ ಮಾತ್ರ ಅನ್ವಯ ಅಂತ ಅಮ್ಮನ ಎಚ್ಚರಿಕೆ
ಮೊದಲು ಮನೆ ನೋಡು ಆಮೇಲೆ ಊರು ಅಪ್ಪನ ಫರ್ಮಾನು
ಈ ಗೊಂದಲದಲ್ಲೂ ಹುಡುಕಿಕೊಂಡು ಒಂದು ಕವಿತೆ ಅಲ್ಲಿ ಒಂದು ಜಾಗ
ಒಂದು ಅಂದರೆ ಒಂದೇ ಅಲ್ಲ ಅಲ್ಲಿ ಹಲವು ಜಾಗ
ಅದರೊಳಗೆ ನೂರು ದಾರಿ ಕಾಡು ಮೇಡು
ಸಪ್ತ ಸಮುದ್ರ ಏಳುಸುತ್ತಿನ ಕೋಟೆ
ಅಂದರೆ ಆಮೇಲೆ ಅಲ್ಲಿ ರಾಜಕುಮಾರಿ ಸಿಗುತ್ತಾಳಾ?
ಕವಿತೆ ಹಾಳಾಗುವುದೇ ಇಲ್ಲಿ
ಅವಳ ಗೊಡವೆ ಬಿಟ್ಟು ಹುಡುಕಬೇಕು ಕವಿತೆ
ಅವಳು ಚಂಚಲೆ ದಿಕ್ಕುತಪ್ಪಿಸುವ ಚದುರೆ
ಮಾಸ್ತರರು ಹೇಳುವ ಸಮುದಾಯ ಗೀತೆ
ಈ ಜಾಗಗಳೆಲ್ಲ ಅರ್ಥವಾದ ಮೇಲೆ ಕವಿತೆಯು
ಒತ್ತೊತ್ತಾಗಿ ಒತ್ತರಿಸಿಕೊಂಡುಬಿಡುವುದೇನೋ ಎಂಪಿತ್ರೀ ಥರ
ಓಪನ್ ಆದರೆ ಪೂರ ಮಹಾಪೂರ
ಕ್ಲೋಸ್ ಮಾಡಿದರೆ ಬಸವನ ಹುಳು
ಓ ಸಿ ಆಟ ಅಂದರೆ ಇದೂ ಇರಬಹುದೇನೋ
ಕೆಲವು ಸಲ ಜಾಗ ಎಲ್ಲ ಎಡಿಟ್ ಮಾಡಿ
ಕವಿತೆ ಇರುಕಿದಂತೆ ಪ್ರಿಂಟು ಮಾಡಿಬಿಡುತ್ತಾರೆ
ಕೇಳುವ ಹಾಗಿಲ್ಲ
ಒತ್ತುವರಿಯ ಜಾಗತೀಕರಣದಲ್ಲಿ ಕವಿತೆ ಉಳಿದುದೇ ದೊಡ್ಡದು
ಇನ್ನು ಮೇಲೆ ಅದೂ ಡೌಟು ಅನ್ನುತ್ತಾರೆ
ಕೊನೆಗೆ ಕವಿತೆಯೆಂದರೆ
ಸಾಲಿಗಾಗಿ ಕಾಯಬೇಕೋ ಜಾಗಕ್ಕಾಗಿ ಹುಡುಕಬೇಕೋ?
ಇದಕ್ಕೆ ಎಲಿಯಟ್ ಏನೂ ಹೇಳಿಲ್ಲ ಅನ್ನುತ್ತಿದ್ದಾರೆ ಮೇಷ್ಟ್ರು
ಈ ವಿಶ್ವಾತ್ಮಕ ಸಮಸ್ಯೆಯ ಸುಡೊಕು ಬಿಡಿಸುವಾಗ
ಇವಳದೊಂದೇ ವರಾತ
ತನಗೆ ತನ್ನದೇ ಆದ ಸ್ಪೇಸ್ ಬೇಕು ಕೊಡು ಕೊಡು ಎಂದು
ಅದು ಮದುವೆಯಾದಾಗ ನೀನೇ ನನ್ನ ಕವಿತೆ ಅಂದು ಬಿಟ್ಟಿದ್ದೆ
ಅಲ್ಲ ಜಾಗ ಅನ್ನುವುದು ಓದುವವರ ಸಮಸ್ಯೆಯೋ
ಕವಿತೆಯ ಸಮಸ್ಯೆಯೋ?
ಯಾರೋ ದೂರದಲ್ಲಿ ಹೇಳುತ್ತಿದ್ದಾರೆ
ಮೊದಲು ಎಲ್ಲರೂ ಬಯಲಾಗಬೇಕು ಆಮೇಲೆ ಜಾಗ ಗೀಗ ಪದ್ಯ ಗಿದ್ಯ
ಕೇಳಿದ್ದೇ ತಡ ಕವಿತೆಯ ಹಾಳೆ ಹಾರಿ ಹೋಗುತ್ತಿದೆ
ಅಲ್ಲಮನಲ್ಲಿ ಒಂದೇ ವಿನಂತಿ
ಕ್ಯಾಚ್ ಹಿಡಿ ಆದರೆ ಔಟ್ ಅನ್ನಬೇಡ
-ಜಿ.ಕೆ.ರವೀಂದ್ರಕುಮಾರ್
Comments