ಕೈಯಿಂದ ಚಿಮ್ಮಿದ ಚೆಂಡಿಗೆ ಗೊತ್ತಿಲ್ಲ
ಮುಂದಿನ ಕ್ಷಣ ತಾನು ಎಲ್ಲಿ ಹೇಗೆ ಎಂದು
ಹೊಡೆಯಬಹುದು ಬಿಡಬಹುದು ಬೀಳಬಹುದು
ಗೆರೆಯ ದಾಟಬಹುದು
ಏನಾದರೂ ಅಷ್ಟು ಸಂತೋಷ ಇಷ್ಟು ಚಡಪಡಿಕೆ ಒಂದಷ್ಟು ನಿಟ್ಟುಸಿರು
ಹೊರಬಿದ್ದ ನಾದಕ್ಕೆ ಗೊತ್ತಿಲ್ಲ
ಯಾರ ಎದೆ ಯಾರ ಕರುಳು ಯಾರ ಕಣ್ಣು ಹೇಗೆ ಎಂದು
ಬೆಳಗಬಹುದು ನೀರಾಗಬಹುದು ಉಸಿರಾಗಬಹುದು
ಕಿವಿಯಲ್ಲೇ ಇಂಗಬಹುದು
ಏನಾದರೂ ಅಷ್ಟು ಇಳಿದಂತೆ ಇಷ್ಟು ಗೆದ್ದಂತೆ ಎಂಥದೋ ತೊಳಲಾಟ
ತಳ್ಳಿಸಿಕೊಂಡ ಸ್ಟ್ರೈಕರ್ ಗೆ ಗೊತ್ತಿಲ್ಲ
ಯಾವ ಕಾಯಿನ್ ಯಾವ ಪೋಚ್ ಯಾವ ದಿಕ್ಕು
ಉದುರಬಹುದು ನಿಲ್ಲಬಹುದು ತೊಡರಬಹುದು
ತನ್ನನ್ನೇ ತಳ್ಳಿದವರು ಹುಡುಕಬಹುದು
ಏನಾದರೂ ಅಷ್ಟು ಖುಷಿ ಇಷ್ಟು ನಿರಾಸೆ ಒಂದಷ್ಟು ಲೆಕ್ಕಾಚಾರ
ಭೂಮಿಗೆ ಬಿದ್ದ ಮೇಲೂ ಎಲ್ಲ ತಿಳಿಯುವುದೆಂದಲ್ಲ
ಯಾವ ಪದ ಯಾರ ಪದಾರ್ಥ ಎಂಥ ಸಂಬಂಧ
ಹೆಣೆಯಬಹುದು ಹರಿಯಬಹುದು ಬಾಳಿಸಬಹುದು
ಒಂದು ಉಸಿರಲ್ಲೇ ಏನೆಲ್ಲ ದೂಡಬಹುದು
ಏನಾದರೂ ಅಲ್ಲೊಂದು ಚೆಂಡು ಇಲ್ಲೊಂದು ಸ್ಟ್ರೈಕರ್ ಒಂದಷ್ಟು ನಾದ
ಜೊತೆಗಷ್ಟು ಆಯಸ್ಸು
ಜಿ ಕೆ ರವೀಂದ್ರಕುಮಾರ್
Comments