top of page
Search

ಸಿಕಾಡ ಮತ್ತು ಅಂಗುಲಹುಳು ಸಂವಾದ

  • ಜಿ.ಕೆ.ರವೀಂದ್ರಕುಮಾರ್
  • Jun 25, 2022
  • 1 min read

(ತಾನು ಪ್ರಪಂಚ ಅಳೆಯುವ ಹುಳು ಅಂತ ಸುಳ್ಳು ಹೇಳಿ ಕೋಗಿಲೆಯ ಹಾಡು ಅಳೆಯುತ್ತ ಜಾಗಬಿಟ್ಟು ಜೀವ ಉಳಿಸಿಕೊಂಡ ಎ.ಕೆ. ರಾಮಾನುಜನ್ ಕವಿತೆಯ ಅಂಗುಲ ಹುಳು ಹಾಗು

ಹದಿನೇಳು ವರ್ಷ ಕೋಶಾವಸ್ಥೆಯಲ್ಲಿ ಭೂಮಿಯೊಳಗೆ ಕೂತು ಹೊರಬಂದು ನಾಲ್ಕುವಾರ ಸತತ ಕೂಗಿ ಸಾಯುವ ಜಿ.ಕೆ.ಆರ್. ಕವಿತೆಯ ಸಿಕಾಡ)


ಅಂದು ಕೋಗಿಲೆಯ ಬಾಯಿಂದ ತಪ್ಪಿಸಿಕೊಂಡು ಹೊರಟು

ಇಂಚು ಇಂಚೇ ಸಾಗಿ ಇಷ್ಟು ದಿನವಾಯಿತು ಬರುವಲ್ಲಿ

ಅಮೇರಿಕೆಯಿಂದ ಇಂಡಿಯಾದವರೆಗೆ ಸಾಗುವಲ್ಲಿ

ಪರಕಾಯ ಪ್ರವೇಶದಿಂದ ಹೊರಬಂದ ಅಂಗುಲ ಹುಳು

ಹೇಳುತ್ತಲೇ ಇದೆ ಬೆವರೂ ಒರೆಸಿಕೊಳ್ಳದೆ ಒಂದೇ ಸಮ


ಮೈಸವರಿ ಸಮಾಧಾನಿಸಿ ಸಿಕಾಡ ಹೇಳಿತು, ಏನು ಅಚ್ಚರಿ?

ನೀನು ಬರಲೆಂದೇ ಕಾಯುತ್ತ ಕೂತಿದ್ದಂತೆ ನಾನು

ಬಂದೆಯಲ್ಲ ಇನ್ನು ನಾನು ತೆರಳಬೇಕೇನೋ


ಇದೇನು ಅವತಾರ ಕೆಟ್ಟು ಹೋಯಿತೇ ಶಾಪ ವಿಮೋಚನೆಯಾಗಲು?

ಇರಲಿ, ಅದೇನು ಕೆಲಸವಿಲ್ಲದೆ ಕೂಗಿ ಕೂಗುತ್ತಲೇ ಸಾಯುವೆಯಲ್ಲ

ಸಾಯಲೆಂದೇ ವರುಷಗಟ್ಟಲೆ ಕಾಯುವೆಯಲ್ಲ

ಬದುಕಿನ ಆನಂದ ತಿಳಿಯದೆ ಹೋಗುವುದಾದರೂ ಯಾಕೆ?


ಅಂಗುಲದ ಹುಳದ ಪ್ರಶ್ನೆಗೆ ನಕ್ಕ ಸಿಕಾಡ ಕೇಳಿತು

ಬದುಕಲೆಂದೇ ನೀನು ಹಕ್ಕಿ ಪ್ರಾಣಿಗಳಿಂದ ತಪ್ಪಿಸಿಕೊಂಡು

ಜೀವ ಬಾಯಾರಿಕೆಯಲ್ಲಿ ವರುಷಗಟ್ಟಲೆ ತೆವಳಿದೆಯಲ್ಲಾ

ಖಂಡ ದಾಟಿದರೂ ದೊರೆತ ಆನಂದವಾದರೂ ಏನು ನಿನಗೆ?


|

ಏನು ಇಲ್ಲದೆಯೂ ಬೇಕಿಲ್ಲದೆಯೂ

ನಾನು ಸವೆದು ಕಾಲ ಸವೆದು ಗುರಿಯು ಸವೆದು ಸವೆದು

ಉತ್ತರವಿಲ್ಲದೆ ತಲೆ ಕೊಡವಿತು ಅಂಗುಲ ಹುಳು


ಇದ್ದರೂ ಇರದಿದ್ದರೂ ಕಾರಣವಿಲ್ಲದೆ ಕೂಗಿ

ಕಾದು ಕಾದು ಸಮೆದು ಸಮೆದು ಸಾವ ಕರೆದು

ಉತ್ತರವಿಲ್ಲದೆ ತಲೆ ಕೆರೆಯಿತು ಸಿಕಾಡ


ಕಾರಣವಿಲ್ಲದೆ ಬಾಳುವೆವೆ ಹಾಗಾದರೆ

ಕಾರಣ ಬೇಡವೇ ಬದುಕಬೇಕಾದರೆ

ಸಾವ ಕಾರಣವೇ ಬದುಕೆ ಹಾಗಾದರೆ?

ಮತ್ತೆ ಕವಿಗಳು ಏನೇನೋ ಹುಡುಕಿದರಲ್ಲಾ

ಹುಡುಕಿ ಹುಡುಕಿ ಬದುಕಿಸಿಕೊಂಡರಲ್ಲಾ...


ಒಂದರೊಳಗೊಂದು ಕಣ್ಣ ನೆಟ್ಟವು ಆಸೆ ಕಂಡವು

ಇವರ ಅಕ್ಷರ ಪದದಲ್ಲಿ ಎಂಥದೋ ಹೊಳಪಿದೆಯಲ್ಲ

ಇವರ ಕನಸು ಕಲ್ಪನೆಯಲ್ಲಿ ಏನೋ ಮಾಯೆಯಿದೆಯಲ್ಲ

ಯಾಕೆ ಬಾಳಬಾರದು ನಾವೂ ಇವರ ಜೊತೆ?

ಇರುವ ಆಸೆಗೆ ಕವಿತೆಯೂ ಕಾರಣ ನೆಪವಾಗಿ

ಕವಿತೆಯತ್ತ ನೋಡಿರಲು


ಯಾಕೋ ಕವಿತೆ ಕಣ್ಣುಮುಚ್ಚಿ ಸ್ತಬ್ಧವಾಗಿದೆ

ಕವಿತೆಯೇ ನಿಂತ ಹೊತ್ತಿನಲ್ಲಿ

ಕಾದು ಕಾದು ಸಾಕಾಗಿ ದಿಗಿಲಾಗಿ ಅವೂ ಸ್ತಬ್ಧವಾಗಿ

ಅಳೆಯಲು ಏನೂ ಇಲ್ಲವಾಗಿ

ಹೇಳಲು ಏನೂ ಉಳಿದಿಲ್ಲದಂತಾಗಿ

ಅದರ ಮೇಲೇರಿ ಸಾಲೇರಿ ಸರುಗಿದಂತೆ


ಕವಿತೆಯೂ ಈಗ ತೆವಳುತ್ತಿರಲು


-ಜಿ.ಕೆ.ರವೀಂದ್ರಕುಮಾರ್

 
 
 

Recent Posts

See All
ಕಣ್ಣು ಕಟ್ಟಿನ ಆಟ

ಒಂದೊಂದು ಅಕ್ಷರ ನಾಪತ್ತೆಯಾದ ಪದಗಳನ್ನೂ ಸರಿಯಾಗಿಯೇ ಓದಿಬಿಡುತ್ತೇವೆ ಅಕ್ಷರಗಳನ್ನೇ ತಿರುವು ಮುರುವಿಟ್ಟು ಪದ ಹುಡುಕಲು ತಿಣುಕುತ್ತೇವೆ ಎಡದಿಂದ ಬಲಕ್ಕೆ ಮೇಲಿಂದ ಕೆಳಕ್ಕೆ ಇಲ್ಲದ ಪದಗಳ ಜೋಡಿಸುತ್ತೇವೆ ಒಂದೊಂದು ಗುಣ ನಾಪತ್ತೆಯಾದ ಮನುಷ್ಯರನ್ನ

 
 
 
ಚೂರು ಪಾರು ಚರಿತೆ

ಎಷ್ಟೇ ಬಳಿ ಬಳಿದು ನೆಕ್ಕಿದರೂ ಅಷ್ಟಿಷ್ಟು ಉಳಿಯುವ ಸಾರು ತಟ್ಟೆಯಲ್ಲಿ ಎಷ್ಟೇ ಎಳೆದೆಳೆದು ಚೀಪಿದರೂ ಚೂರು ಪಾರು ಬೆರಳಿನಲ್ಲಿ ನಾಕಾರು ಇರುವೆಗಳಿಗೆ ವಾರಕ್ಕಾಗುವಷ್ಟು...

 
 
 
ಮರವನಪ್ಪಿದ ಬಳ್ಳಿ

ಮರವನಪ್ಪಿದ ಬಳ್ಳಿಯನ್ನುಯನ್ನು ಮರವೇ ಅಪ್ಪಿರಬಹುದು ಹಾಗೂ ಇರಬಹುದು ಹೀಗೂ ಇರಬಹುದು ಭಾಷೆಯಿಲ್ಲದ ಜೀವಗಳು ದಾವೆ ಹೂಡಲಾರವು ಎದೆ ಕೊರಳು ಗಲ್ಲ, ಬೆನ್ನು ಆತುಕೊಳ್ಳುವ...

 
 
 

Comments


©2021 by G K RAVEENDRAKUMAR. Proudly created with Wix.com

bottom of page