top of page
Search

ಜಗವೂ ಜಗಕೆ ಆಗದಿರುವಲ್ಲಿ

  • ಜಿ.ಕೆ.ರವೀಂದ್ರಕುಮಾರ್
  • Sep 10, 2023
  • 1 min read

ಕಸಿವಿಸಿಯ ಕವಲಲ್ಲಿ ಯಾರೋ ಹೆಚ್ಚಿಟ್ಟ ಹೋಳು

ಸೆಳೆದು ಕರೆದು ಎಳೆದು ಸವಿಯುವ ವೇಳೆ

ಮುಟ್ಟಿ ನೋಡಿಕೋ ಮೈಯ ಹಣ್ಣಿನಂಥ ಮನವ


ಹಿಡಿಯೋ ಹುಡಿಯೋ ಅರಿವಾಗದ ಗಲಿಬಿಲಿಯೋ

ಹೋಳೋ ಗೀಳೋ ರುಚಿ ಬಾಳಿನ ಸೀಳೋ

ತೆತ್ತುಕೊಳ್ಳುವುದಿದೆಯಲ್ಲಾ ಮನದ ಮಾಯಾರಿಕೆಗೆ


ದಾರಿ ಮುಚ್ಚಿದ ಶಬ್ದಕ್ಕೆ ಹೊಕ್ಕಳ ದಾಹ

ತಳೆಯಲಾಗದ ಕವಿತೆಗೆ ಶಬ್ದದ ಕೊರೆ


ಮೊರೆಯಿಡುವ ಎಲ್ಲರೂ ಕವಲಾಗಿ ಹೋಳಾಗಿ ನೆಲದ ಪಾಲಾಗುವಲ್ಲಿ

ಯಾರು ಯಾರನ್ನು ಕ್ಷಮಿಸುವರು


ಮತ್ತು ಕ್ಷಮಿಸಲಾರರು


|


ಹಿತ್ತಲೆನ್ನುವುದಿದೆಯಲ್ಲಾ ಎದೆಯೆನ್ನುವುದಿದ್ದ ಮೇಲೆ

ತೇಲುವುದಿದೆಯಲ್ಲಾ ಮುಳುಗಿಸುವ ನೀರ ಮೇಲೆ

ಹಿಡಿಯಲಾಗದ ಕಾಲಕ್ಕೆ ಯಾವುದೋ ಒಂದು ದೇಶ


ಒಂದು ಕೋಟೆ

ಒಂದು ಗಿಣಿ

ಒಂದು ಜೀವ


ಕಥೆಯು ಸಾಗುವಲ್ಲಿ ಮಧ್ಯೆ ಮಧ್ಯೆ ಕಾಡುವ

ಎದೆಯ ಮೂಕ ಸಾಲು

ಮಡಿಲಂತೆ ಮಡುವಂತೆ ಹಾಡುವಂತೆ


ಯಾರಿಗಾಗಿ ಯಾರು ಹಾಡುವರು

ಮತ್ತು ಹಾಡಲಾರರು


|


ಜಗವೂ ಜಗಕೆ ಆಗದಿರುವಲ್ಲಿ

ಜಗವೇ ಬಾಳುವುದಿದೆಯಲ್ಲಾ


ಅದರ ಗುಟ್ಟಿನ ಸಾಲಿಗಾಗಿ

ಕಾಯುವಲ್ಲಿ

ತಳಮಳಿಸುವಲ್ಲಿ


ಅತ್ತಾರೆ ನಕ್ಕಂತೆ ನಕ್ಕಾರೆ ಅತ್ತಂತೆ

ಮರೆತವರು ಯಾರು

ಮರೆತು ಹೋದವರು ಯಾರು?


-ಜಿ.ಕೆ. ರವೀಂದ್ರಕುಮಾರ್


 
 
 

Recent Posts

See All
ಕಣ್ಣು ಕಟ್ಟಿನ ಆಟ

ಒಂದೊಂದು ಅಕ್ಷರ ನಾಪತ್ತೆಯಾದ ಪದಗಳನ್ನೂ ಸರಿಯಾಗಿಯೇ ಓದಿಬಿಡುತ್ತೇವೆ ಅಕ್ಷರಗಳನ್ನೇ ತಿರುವು ಮುರುವಿಟ್ಟು ಪದ ಹುಡುಕಲು ತಿಣುಕುತ್ತೇವೆ ಎಡದಿಂದ ಬಲಕ್ಕೆ ಮೇಲಿಂದ ಕೆಳಕ್ಕೆ ಇಲ್ಲದ ಪದಗಳ ಜೋಡಿಸುತ್ತೇವೆ ಒಂದೊಂದು ಗುಣ ನಾಪತ್ತೆಯಾದ ಮನುಷ್ಯರನ್ನ

 
 
 
ಚೂರು ಪಾರು ಚರಿತೆ

ಎಷ್ಟೇ ಬಳಿ ಬಳಿದು ನೆಕ್ಕಿದರೂ ಅಷ್ಟಿಷ್ಟು ಉಳಿಯುವ ಸಾರು ತಟ್ಟೆಯಲ್ಲಿ ಎಷ್ಟೇ ಎಳೆದೆಳೆದು ಚೀಪಿದರೂ ಚೂರು ಪಾರು ಬೆರಳಿನಲ್ಲಿ ನಾಕಾರು ಇರುವೆಗಳಿಗೆ ವಾರಕ್ಕಾಗುವಷ್ಟು...

 
 
 
ಮರವನಪ್ಪಿದ ಬಳ್ಳಿ

ಮರವನಪ್ಪಿದ ಬಳ್ಳಿಯನ್ನುಯನ್ನು ಮರವೇ ಅಪ್ಪಿರಬಹುದು ಹಾಗೂ ಇರಬಹುದು ಹೀಗೂ ಇರಬಹುದು ಭಾಷೆಯಿಲ್ಲದ ಜೀವಗಳು ದಾವೆ ಹೂಡಲಾರವು ಎದೆ ಕೊರಳು ಗಲ್ಲ, ಬೆನ್ನು ಆತುಕೊಳ್ಳುವ...

 
 
 

Comments


©2021 by G K RAVEENDRAKUMAR. Proudly created with Wix.com

bottom of page