ಎಷ್ಟೇ ಬಳಿ ಬಳಿದು ನೆಕ್ಕಿದರೂ ಅಷ್ಟಿಷ್ಟು ಉಳಿಯುವ ಸಾರು ತಟ್ಟೆಯಲ್ಲಿ
ಎಷ್ಟೇ ಎಳೆದೆಳೆದು ಚೀಪಿದರೂ ಚೂರು ಪಾರು ಬೆರಳಿನಲ್ಲಿ
ನಾಕಾರು ಇರುವೆಗಳಿಗೆ ವಾರಕ್ಕಾಗುವಷ್ಟು
ಧರ್ಮದ ಮರ್ಮವೇ ಇದು
ಕೊಡದವನ ಕೈಯಲ್ಲೂ ದಾಸೋಹದ ಚುಂಗು
ತಲೆಮಾರಿಗೆ ಜರುಗುವ ಪುಣ್ಯದ ಬಾಬತ್ತು
ಯಾಕಾಗಿ ಇದು ಎಂಬ ಪ್ರಶ್ನೆಯೇ ಈ ಜಗದ ತುತ್ತು
ಗೊತ್ತಾಗುವುದಿಲ್ಲ ಆದರೂ ಕೇಳದೇ ಬಿಡುವುದಿಲ್ಲ
ಯಾವುದೋ ಮಳೆ ಯಾರದೋ ಭೂಮಿ ಯಾರದೋ ಬೀಜ
ಯಾವುದೋ ಗಿಡ ಯಾರದೋ ಫಲ ಯಾರಿಗೋ ನೆರಳು
ಹುಡುಕಿಕೊಂಡು ಹೋದವನು ಎಲ್ಲವನ್ನೂ ತ್ಯಜಿಸಿದ
ಹುಡುಕದೇ ಉಂಡವನು ಎಲ್ಲವನ್ನೂ ಬೆಳೆಸಿದ
ಯಾವುದು ಸರಿ? ಈ ಜಗದ ಇನ್ನೊಂದು ತುತ್ತು
ಅವನು ತ್ಯಜಿಸಿದ ಫಲವೇ ಇಲ್ಲಿ ಬೆಳೆಯಿತೋ
ತ್ಯಜಿಸಲಾಗದವನ ದುಡಿಮೆಯೇ ಇದನ್ನು ಬೆಳೆಸಿತೋ
ಧರ್ಮಸೂಕ್ಷ್ಮದ ಮಾತು ಇದು
ರಾಜಸೂಕ್ಷ್ಮದ ಭಾವಕ್ಕೆ ಜೋತು ಬಿದ್ದಿರಲು
ಉಳಿಯುವುದು ಉಳಿಸುವುದು ಉಳಿಯುವ ಮಾತಿರಲಾರದು
ಅಳಿಯುವುದು ಅಳಿಸುವುದು ಅಳಿಯುವ ಮಾತಿರಲಾರದು
ಯಾವುದೋ ಮಗುಚಿಹೋದ ನಾಗರಿಕತೆಯ ಸಾರವೇ
ಇಂದು ನಮ್ಮ ಹಿತ್ತಲ ಹೂವಿದ್ದೀತು
ಮೂಸುವ ಎಲ್ಲರಿಗೂ ಮೂಸಿದಷ್ಟು
ಮಾಸುವ ಎಲ್ಲವೂ ಮಾಸಿದಷ್ಟು
ನೂರಕ್ಕೆ ನೂರು ಮೂಸಿದವನೂ ಚರಿತ್ರೆಯ ತುತ್ತಾಗುವಾಗ
ಅಷ್ಟು ಇಷ್ಟು ಉಳಿದಿದ್ದೀತು
ನಾಕಾರು ದೇಶಗಳ ನಾಕಾರು ತಲೆಮಾರಿಗಾಗುವಷ್ಟು
ಸಾವಿರಾರು ಮಕ್ಕಳಿಗೆ ಒಂದು ಪರೀಕ್ಷೆಗಾಗುವಷ್ಟು
ಎಷ್ಟೇ ಸೊಕ್ಕಿ ಮೆರೆದರೂ ಅಷ್ಟಿಷ್ಟು ತುಳುಕುವ ಕರುಣೆ ಬೊಗಸೆಯಲ್ಲಿ
ಎಷ್ಟೇ ಬಾಗಿ ಬದುಕಿದರೂ ಚೂರು ಪಾರು ತಿಮಿರು ಮೈಯಲ್ಲಿ
ಮಹಾ
ನವಮಿಯೂ ಇರಬೇಕು
ಮಹಾ
ಲಯವೂ ಬರಬೇಕು
ನಮ್ಮ ಬಟ್ಟೆ ಎರಡು ದಿನವೂ ಒಣಗಬೇಕು
-ಜಿ.ಕೆ. ರವೀಂದ್ರಕುಮಾರ್
Comments